ಓರಿನೋಕೋ: ವೆನಿಜ್ವೀಲದ ದಕ್ಷಿಣ ಭಾಗದಲ್ಲಿರುವ ಪರಮ ಪರ್ವತಗಳಲ್ಲಿ ಹುಟ್ಟಿ ಟ್ರಿನಿಡಾಡ್ ದ್ವೀಪದ ದಕ್ಷಿಣದಲ್ಲಿ ಅಟ್ಲಾಂಟಿಕ್ ಸಾಗರ ಸೇರುವ ನದಿ; ದಕ್ಷಿಣ ಅಮೆರಿಕದ ಅತ್ಯಂತ ದೊಡ್ಡ ನದಿಗಳ ಪೈಕಿ ಮೂರನೆಯದು. ಇದರ ಉದ್ದ 2,050 ಕಿಮೀ. ಓರಿನೋಕೋ ನದಿಯ ಮೂಲವನ್ನು ಪತ್ತೆಹಚ್ಚಲು ಅನೇಕ ವರ್ಷಗಳಿಂದ ಪ್ರಯತ್ನ ನಡೆಯುತ್ತಿದ್ದು, 1951ರಲ್ಲಿ ಮೇಜರ್ ರಿಸ್ಕ್ವಿಸ್ ಇರಿಬಾರೆನ್ ಸಫಲನಾದ. ಇದು ಉತ್ತರ ಅಕ್ಷಾಂಶ 20 19’ ಮತ್ತು ಪಶ್ಚಿಮ ರೇಖಾಂಶ 630 22’ ಕೂಡುವೆಡೆಯಲ್ಲಿ-ಬ್ರಜಿûಲ್ ಗಡಿಯ ಹತ್ತಿರ ಹತ್ತಿರ-ಹುಟ್ಟಿ ಮೊದಲು ಪಶ್ಚಿಮಕ್ಕೆ ಹರಿದು, ಅನಂತರ ಉತ್ತರಕ್ಕೆ ಸಾಗಿ ಕೊಲಂಬಿಯ ಮತ್ತು ವೆನಿಜ್ವೀಲ ರಾಷ್ಟ್ರಗಳ ಗಡಿಯಾಗಿ ಪರಿಣಮಿಸುತ್ತದೆ. ಓರಿನೋಕೋ ನದಿಯ ಮುಖಜಭೂಮಿಯ ವಿಸ್ತೀರ್ಣ ಸುಮಾರು 5000 ಚ.ಮೈ. ಇಲ್ಲಿ ಈ ನದಿ ಹಲವು ಕವಲುಗಳಾಗಿ ಒಡೆಯುತ್ತದೆ.

ಓರಿನೋಕೋ ನದಿಗೆ ಅನೇಕ ಉಪನದಿಗಳಿವೆ. ಇವುಗಳ ಪೈಕಿ ಅಟಪೊ ಮತ್ತು ಗ್ವವಿಯೇರ್ ಮುಖ್ಯ. ಇವುಗಳಿಂದ ಕೂಡಿ ಅರ್ಧ ದೂರ ಕ್ರಮಿಸುವ ವೇಳೆಗೆ ನದಿಯ ಪಾತ್ರ ಸುಮಾರು ಒಂದು ಮೈಲಿ ಅಗಲವಾಗುತ್ತದೆ. ಇದು ಅಲ್ಲಲ್ಲಿ ಕವಲೊಡೆದು ಕೂಡುವುದರಿಂದ ಸಂಭವಿಸಿರುವ ದ್ವೀಪಗಳು ಅನೇಕ. ಋತುಮಾನಕ್ಕನುಸಾರವಾಗಿ ಪ್ರವಾಹ ಹೆಚ್ಚುಕಡಿಮೆಯಾಗುತ್ತದೆ; ಜೂನ್ ತಿಂಗಳಿಂದ ಆಗಸ್ಟ್‌ವರೆಗೆ ಅಧಿಕ, ನವೆಂಬರಿನಿಂದ ಏಪ್ರಿಲ್ವರೆಗೆ ಕಡಿಮೆ. ಜಲಾನಯನ ಪ್ರದೇಶದ ವಿಸ್ತೀರ್ಣ 3,60,000 ಚ.ಮೈ.ಗಳಿಗೂ ಹೆಚ್ಚು ಇದು ವೆನಿಜ್ವೀಲದ ವಿಸ್ತೀರ್ಣದ 4/5 ಭಾಗ. ಈ ನದಿ 3,523 ಅಡಿಗಳ ಎತ್ತರ ಪ್ರದೇಶದಿಂದ ಇಳಿದು ಬರುವಾಗ ಸಂಭವಿಸಿರುವ ಜಲಪಾತಗಳು ಹಲವಾರು. ಇದರಿಂದಾಗಿ ವೆನಿಜಿûೕ್ವಲ ರಾಷ್ಟ್ರದಲ್ಲಿ ವಿದ್ಯುದುತ್ಪಾದನೆಯ ಅವಕಾಶ ಧಾರಾಳವಾಗಿದೆ. ಅಟುರಾಸ್ ನದೀಮುಖದಿಂದ ಮೇಲೆ 700 ಮೈಲಿಗಳವರೆಗೆ ನೌಕಾಯಾನ ಸಾಧ್ಯ. ಓರಿನೋಕೋ ನದಿಯ ದಕ್ಷಿಣಕ್ಕೆ ಉತ್ತಮವಾದ ಕಬ್ಬಿಣದ ಅದುರಿನ ನಿಕ್ಷೇಪವುಂಟು. ಇದನ್ನು ನದಿಯ ಮೇಲೆ ಸಾಗಿಸಲಾಗುತ್ತದೆ.	(ಆರ್.ಡಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ